ಒಂದು ಕಟ್ಟಡ ನಿರ್ಮಾಣವಾಗಬೇಕಾದರೆ ಅದಕ್ಕೆ ಮೊದಲೇ ಪೂರ್ವ ತಯಾರಿ ನಡೆಸಬೇಕಾಗುತ್ತದೆ. ಇಂಜಿನಿಯರ್‌ನಿಂದ ಹಿಡಿದು ಮೇಸ್ತ್ರಿ ತನಕ ಎಲ್ಲವನ್ನೂ ನಾವು ಮಾಡಿಕೊಳ್ಳಬೇಕಾಗುತ್ತದೆ ಅಥವಾ ಕಟ್ಟಡ ನಿರ್ಮಾಣವನ್ನು ಗುತ್ತಿಗೆಯನ್ನಾದರೂ ನೀಡಬೇಕಾಗುತ್ತದೆ. ಒಂದು ಸಣ್ಣ ಕಟ್ಟಡ ನಿರ್ಮಾಣವಾಗಬೇಕಾದರೂ ಕೆಲವು ತಿಂಗಳುಗಳೇ ಬೇಕಾಗುತ್ತದೆ ಇದಕ್ಕೆ ಕಾರಣ ಕಾರ್ಮಿಕರ ಕೊರತೆ ಮತ್ತು ಕಟ್ಟಡ ನಿರ್ಮಾಣ ಸಾಮಾಗ್ರಿಗಳ ಕೊರತೆ, ನೀರಿನ ಕೊರತೆ ಹೀಗೇ ಒಂದಲ್ಲ ಒಂದು ಸಮಸ್ಯೆ ಉಂಟಾಗುವುದು ಸಹಜ. ಆದರೆ ಒಳಮೊಗ್ರು ಗ್ರಾಮದ ಶೇಕಮಲೆಯಲ್ಲಿ ನೂತನ ಮದ್ರಸ ಕಟ್ಟಡವೊಂದು ಕೇವಲ ೨೦ ದಿನದಲ್ಲೇ ನಿರ್ಮಾಣವಾಗಿದೆ. ವಾರದೊಳಗೆ ಗೋಡೆಯ ನಿರ್ಮಾಣವಾದರೆ ಉಳಿದ ಕೆಲಸ ಒನ್ನೊಂದು ವಾರದೊಳಗೆ ನಡೆದು ಒಟ್ಟಿನಲ್ಲಿ ೨೦ ದಿನದಲ್ಲಿ ಕಾಮಗಾರಿ ಪೂರ್ಣಗೊಂಡು ಉದ್ಘಾಟನೆಯೂ ನಡೆದಿದೆ.
ಆಕರ್ಷಣ್ ಇಂಡಸ್ಟ್ರೀಸ್ ನಿಂದ ಕಟ್ಟಡ ನಿರ್ಮಾಣ
ಅತ್ಯಾಧುನಿಕ ಟೆಕ್ನಾಲಜಿಯ ಕಾಂಕ್ರೀಟ್ ಸ್ಲಾಬ್‌ಗಳನ್ನು ಬಳಸಿ ಪುತ್ತೂರಿನ ಮುಕ್ರಂಪಾಡಿಯ ಆಕರ್ಷಣ್ ಇಂಡಸ್ಟ್ರೀಸ್ ಮೂಲಕ ಈ ಕಟ್ಟಡವನ್ನು ನಿರ್ಮಾಣ ಮಾಡಲಾಗಿದೆ. ಒಟ್ಟು ೬೭೦ ಚ ಅ ವಿಸ್ತೀರ್ಣದ ಕಟ್ಟಡ ನಿರ್ಮಾಣಕ್ಕೆ ತಗಲಿರುವ ಸಮಯ ಕೇವಲ ೨೦ ದಿನಗಳು. ಸಿಮೆಂಟ್‌ನ ಸ್ಲಾಬ್‌ಗಳನ್ನು ಬಳಸಿ ಕಟ್ಟಡ ನಿರ್ಮಾಣ ಮಾಡಲಾಗಿದೆ, ಇದಕ್ಕೆ ಸಿಮೆಂಟ್ ಪಿಲ್ಲರ್‌ಗಳನ್ನೂ ಜೋಡಿಸಲಾಗಿದೆ. ೪೫ ಅಡಿ ಉದ್ದ ಮತ್ತು ೧೪ ಅಡಿ ಅಗಲದಲ್ಲಿ ಕಟ್ಟಡ ನಿರ್ಮಾಣ ಮಾಡಲಾಗಿದೆ.
ತೆರೆದ ತರಗತಿ
ಕಟ್ಟಡದಲ್ಲಿ ಗೋಡೆಗಳಿಗಿಂದ ಹೆಚ್ಚಾಗಿ ಕಿಟಕಿಗಳೇ ಇದೆ. ತರಗತಿಗಳು ತೆರೆದಿರಬೇಕು ಮತ್ತು ಗಾಳಿ ಬೆಳಕಿನ ವ್ಯವಸ್ಥೆ ಸಮರ್ಪಕವಾಗಿರಬೇಕು ಎಂಬ ನಿಯಮ ಶಾಲಾ ಕಟ್ಟಡಗಳಿಗಿರುವ ಕಾರಣ ಅದಕ್ಕನುಸಾರಾವಾಗಿ ಕಟ್ಟಡ ನಿರ್ಮಾಣ ಮಾಡಲಾಗಿದೆ. ದಕ್ಷಿಣ ಭಾಗದಲ್ಲಿ ಕಿಟಕಿಗಳು ಎತ್ತರದಲ್ಲಿದ್ದರೆ ಉತ್ತರ ದಿಕ್ಕಿನ ಕಿಟಕಿಗಳು ತಗ್ಗಿನಲ್ಲಿದೆ. ಮಕ್ಕಳು ಕಟ್ಟಡದ ಜಗಲಿಗೆ ಹತ್ತಲು ಸುಲಭವಾಗುವ ರೀತಿಯಲ್ಲಿ ಅಡಿಪಾಯದ ನಿರ್ಮಾಣ ಕಾಮಗಾರಿ ನಡೆದಿದೆ. ಒಂದು ಕೋಣೆಯಲ್ಲಿ ೩೦ ರಿಂದ ೪೦ ಮಂದಿ ಮಕ್ಕಳನ್ನು ಕೂರಿಸಿ ಪಾಠ ಮಾಡಬಹುದಾಗಿದೆ.
ಹಂಚಿನ ಮಾಡು
ಹಳೆಯ ಕಟ್ಟಡದ ಸಾಮಾಗ್ರಿಗಳಿದ್ದಲ್ಲಿ ಇಂಥಹದೊಂದು ಕಟ್ಟಡವನ್ನು ಸುಲಭದಲ್ಲಿ ನಿರ್ಮಾಣ ಮಾಡಬಹುದಾಗಿದೆ. ಶೇಕಮಲೆಯಲ್ಲಿ ಹಳೆಯ ಮದ್ರಸ ಸಾಮಾಗ್ರಿಗಳಿಂದಲೇ ಹೊಟ ಕಟ್ಟಡಕ್ಕೆ ಮಾಡು ನಿರ್ಮಾಣ ಮಾಡಲಾಗಿದೆ. ಹೊಸ ಕಟ್ಟಡ ನಿರ್ಮಾಣಕ್ಕೆ ಒಟ್ಟು ೨ ಲಕ್ಷ ಖರ್ಚು ಮಾಡಲಾಗಿದೆ. ಹಳೆಯ ಕಟ್ಟಡ ಸಾಮಾಗ್ರಿಗಳನ್ನು ಈ ತಂತ್ರಜ್ಞಾನದ ಕಟ್ಟಡ ನಿರ್ಮಾಣಕ್ಕೆ ಯಥೇಚ್ಚವಾಗಿ ಬಳಸಬಹುದಾಗಿದೆ.
ಲೈಫ್ ಟೈಮ್ ಗ್ಯಾರಂಟಿ
ಸ್ಲಾಬ್‌ನಿಂದ ನಿರ್ಮಾಣ ಮಾಡಲಾದ ಕಟ್ಟಡದ ಗೋಡೆಗೆ ಲೈಫ್ ಟೈಮ್ ಗ್ಯಾರಂಟಿ ಕೊಡುತ್ತಾರೆ. ತುಕ್ಕು ಹಿಡಿಯುವುದು ಅಥವಾ ಬಿಸಲಿಗೆ ಒಡೆಯುವುದು ಸೇರಿದಂತೆ ಯಾವುದೇ ಸಮಸ್ಯೆಗಳು ಇದರಲ್ಲಿ ಉದ್ಭವವಾಗುವುದಿಲ್ಲ. ಮಾಡು ಹಂಚಿನಿಂದ ನಿರ್ಮಾಣ ಮಾಡುವ ಕಾರಣ ಕಟ್ಟಡದೊಳಗೆ ತಂಪಿನ ವಾತಾವರಣ ಸದಾ ಇರುತ್ತದೆ. ಕಟ್ಟಡ ಸುತ್ತಲೂ ಹೂದೋಟ ಅಥವಾ ಫಲವಸ್ತುಗಳ ಗಿಡಗಳನ್ನು ನೆಟ್ಟರೆ ಕಟ್ಟಡಗಳು ಇನ್ನಷ್ಟು ವರ್ಣಮಯವಾಗಿ ಗೋಚರಿಸುತ್ತದೆ.
ಆಧುನಿಕ ಟೆಕ್ನಾಲಜಿಯ ಕಾಂಕ್ರೀಟ್ ಸ್ಲಾಬ್‌ಗಳನ್ನು ಬಳಸಿ ಮೊದಲ ಬಾರಿಗೆ ಶಾಲಾ ಕಟ್ಟಡ ನಿರ್ಮಾಣ ಮಾಡಿದ್ದೇವೆ. ಕಡಿಮೆ ಖರ್ಚಿನಲ್ಲಿ ಸಾಧ್ಯವಾಗಲಿದೆ. ಹಳೆಯ ಕಟ್ಟಡಗಳನ್ನು ಅಥವಾ ತುಂಬಾ ಹಳೆಯ ಕಾಲದ ಮನೆಗಳನ್ನು ಒಡೆದು ಹೊಸ ಮನೆ ಕಟ್ಟುವವರು ತಮ್ಮ ಹಳೆಯ ಮನೆಯ ಸಾಮಾಗ್ರಿಗೇ ಅನುಗುಣವಾಗಿ ಅದೇ ಮಾದರಿಯ ಮನೆಯಲ್ಲಿ ನಿರ್ಮಾಣ ಮಾಡಲು ಸಾಧ್ಯವಾಗುತ್ತದೆ. ಮಾಡಿನ ಮರದ ಸಾಮಾಗ್ರಿಗಳು ಹಳೆಯದೇ ಇರುವ ಕಾರಣ ಗೋಡೆ ನಿರ್ಮಾಣದ ಖರ್ಚು ಮಾತ್ರ ತಗಲುತ್ತದೆ. ಇಂಥಹ ಕಟ್ಟಡಕ್ಕೆ ಹೆಚ್ಚಿನ ಬೇಡಿಕೆಯೂ ಇದು ಅತ್ಯಂತ ಕಡಿಮೆ ದಿನಗಳಲ್ಲಿ ಇದರ ಕಾಮಗಾರಿ ಪೂರ್ಣ ಸಾಧ್ಯ. ಮೊ: 6364143375
News credits: puttur.suddinews.com